ಉಸ್ಮಾನಿಯಾ ವಿಶ್ವವಿದ್ಯಾನಿಲಯ
	ಭಾರತದಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯಗಳಲ್ಲಿ ಒಂಭತ್ತನೆಯದು. ಸ್ಥಾಪನೆ 1918. ಆಂಧ್ರ ಪ್ರದೇಶದ ಹೈದರಾಬಾದಿನಲ್ಲಿದೆ. ಏಳನೆಯ ನಿeóÁಮ ಸರ್ ಮೀರ್ ಉಸ್ಮಾನ್ ಅಲಿಖಾನ್ ಇದರ ಸ್ಥಾಪಕ. ಆದುದರಿಂದಲೇ ಸಂಸ್ಥೆಗೆ ಆ ಹೆಸರು. ಆಗಿನ ಹೈದರಾಬಾದ್ ಸರ್ಕಾರದ ರಾಜ್ಯಭಾಷೆಯಾದ ಉರ್ದುವನ್ನು ಬೋಧನ ಮಾಧ್ಯಮವನ್ನಾಗಿ ಬಳಸಿದುದು ಈ ವಿಶ್ವವಿದ್ಯಾನಿಲಯದ ಒಂದು ವೈಶಿಷ್ಟ್ಯ.

	ಹೈದರಾಬಾದಿನಿಂದ ಸುಮಾರು ಮೂರು ಮೈಲಿ ದೂರದ ಅಡಿಕ್‍ಮೇಟಿನಲ್ಲಿ 1,600 ಎಕರೆಯ ನಿವೇಶನವನ್ನು ಇದಕ್ಕೆ ಆರಿಸಲಾಯಿತು. ಮುಖ್ಯ ಕಟ್ಟಡವನ್ನು 1939ರಲ್ಲಿ, 30 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಲಾಯಿತು. ವಾಸ್ತುಶಿಲ್ಪದ ದೃಷ್ಟಿಯಿಂದ ಈ ಕಟ್ಟಡ ಸುಂದರವಾಗಿದೆ. ಈಗ ಇಲ್ಲಿ ಆಟ್ರ್ಸ್ ಅಂಡ್ ಕಾಮರ್ಸ್ ಕಾಲೇಜ್ ಇದೆ. ವಿe್ಞÁನ ಭಾಗದ ಕಟ್ಟಡಗಳು, ಗ್ರಂಥಾಲಯ, ಲಾ ಕಾಲೇಜು, ಅತಿಥಿ ಮಂದಿರ, ವಿದ್ಯಾರ್ಥಿ ನಿಲಯಗಳು, ವಿಶ್ವವಿದ್ಯಾನಿಲಯದ ಕಾರ್ಯಸೌಧ ಮೊದಲಾದ ಕಟ್ಟಡಗಳು ಅಂದವಾಗಿ ಶೋಭಿಸುತ್ತಿವೆ.

	225 ವಿದ್ಯಾರ್ಥಿಗಳು, 25 ಜನ ಅಧ್ಯಾಪಕರಿಂದ ಈ ವಿಶ್ವವಿದ್ಯಾನಿಲಯ ಪ್ರಾರಂಭವಾಯಿತು. ಈಗ ಇದು ಹರವಾಗಿ ಬೆಳೆದಿದೆ. 65ಕ್ಕಿಂತ ಹೆಚ್ಚು ಕಾಲೇಜುಗಳು ಇದರ ಆಡಳಿತಕ್ಕೆ ಒಳಪಟ್ಟಿವೆ. 1967-68ರಲ್ಲಿ 43,254ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದರು. ಇದರಲ್ಲಿ 7,480 ವಿದ್ಯಾರ್ಥಿನಿಯರು. ಈಗ ಒಟ್ಟಿನಲ್ಲಿ 9 ಶಾಖೆಗಳಿವೆ (ಫ್ಯಾಕಲ್ಟೀಸ್), ಆಟ್ರ್ಸ್ ಅಂಡ್ ಕಾಮರ್ಸ್ ಕಾಲೇಜು ಒಂದರಲ್ಲಿಯೇ ಬೇರೆ ಬೇರೆ ವಿಷಯಗಳ 30 ವಿಭಾಗ (ಡಿಪಾರ್ಟ್‍ಮೆಂಟ್ಸ್)ಗಳಿವೆ. ಕಳೆದ 50 ವರ್ಷಗಳಲ್ಲಿ 10 ಜನ ಉಪಕುಲಪತಿಗಳು ಆಗಿಹೋಗಿದ್ದಾರೆ.

	ಮೊದಲಿನಿಂದಲೂ ಸರ್ಕಾರದ ಅಂಗವಾಗಿದ್ದು, 1948ರಲ್ಲಿ ಸ್ವತಂತ್ರ ಆಡಳಿತಕ್ಕೆ ಒಳಪಟ್ಟಿತು. 1918ರಿಂದ ಸುಮಾರು 1954ರವರೆಗೆ ಉರ್ದು ಇಲ್ಲಿಯ ಬೋಧನ ಮಾಧ್ಯಮವಾಗಿತ್ತು. ಈ 35 ವರ್ಷಗಳಲ್ಲಿ, ಎಲ್ಲ ವಿಷಯಗಳನ್ನೂ, ಉರ್ದುವಿನಲ್ಲಿಯೇ ಪಾಠ ಹೇಳಿಕೊಡುತ್ತಿದ್ದರು. ಅವುಗಳಲ್ಲಿ ವಿe್ಞÁನ, ವೈದ್ಯಶಾಸ್ತ್ರ, ಯಂತ್ರಶಾಸ್ತ್ರ ಮುಂತಾದವು ಮುಖ್ಯವಾದುವು. ಉರ್ದುವಿನಲ್ಲಿ ಎಲ್ಲ ಪಾರಿಭಾಷಿಕ ಶಬ್ದಗಳನ್ನೂ ರೂಪಿಸಿಕೊಳ್ಳಲಾಗಿತ್ತು. ಎಲ್ಲ ವಿಷಯಗಳಿಗೂ ಉರ್ದುವಿನಲ್ಲಿ ಗ್ರಂಥಗಳು ದೊರೆಯುತ್ತಿದ್ದವು. ಇವೆಲ್ಲಕ್ಕೂ ಅಣಿ ಮಾಡಿಕೊಟ್ಟ ವಿಶ್ವವಿದ್ಯಾನಿಲಯದ ಅಂದಿನ ಭಾಷಾಂತರ ವಿಭಾಗದ ಕಾರ್ಯ ಸ್ತುತ್ಯವಾದುದು.

	ಕನ್ನಡ ವಿಭಾಗ ಈ ವಿಶ್ವವಿದ್ಯಾನಿಲಯದ ಆರಂಭದಿಂದಲೂ ಇದೆ. 1933ರ ವರೆಗೆ, ಈ ವಿಭಾಗದಲ್ಲಿ, ಒಬ್ಬ ಅಧ್ಯಾಪಕ ಮಾತ್ರ ಇದ್ದ. ಪ್ರೊ.ಡಿ.ಕೆ.ಭೀಮಸೇನರಾಯರು ಈ ವಿಭಾಗದ ಮುಖ್ಯಸ್ಥರಾದ ಮೇಲೆ (1934) ಕನ್ನಡ ವಿಭಾಗ ವಿಸ್ತøತಗೊಂಡಿತು. ಸ್ನಾತಕೋತ್ತರ ಹಾಗೂ ಸಂಶೋಧನ ವಿಭಾಗಗಳನ್ನು ತೆರೆಯಲಾಯಿತು. ಕರ್ನಾಟಕ ಸಂಘದ ಚಟುವಟಿಕೆಗಳನ್ನು ವ್ಯಾಪಕಗೊಳಿಸಿ ತಾವರೆ ಎಂಬ ವಾರ್ಷಿಕ ಪತ್ರಿಕೆಯನ್ನು ಕನ್ನಡ ವಿಭಾಗದಿಂದ ಹೊರಡಿಸಿದುದಲ್ಲದೆ ಹೈದರಾಬಾದಿನ 6-7 ಕಾಲೇಜುಗಳಲ್ಲೂ ಗುಲ್ಬರ್ಗ, ರಾಯಚೂರು, ಯಾದಗಿರಿ ಕಾಲೇಜುಗಳಲ್ಲೂ ಕನ್ನಡ ಅಧ್ಯಯನಕ್ಕಾಗಿ ಎಲ್ಲ ವ್ಯವಸ್ಥೆಯನ್ನೂ ಮಾಡಲಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

(ಆರ್.ಆರ್.ಕೆ.)